top of page

ಡಾ. ಅಂಜಲಿ ನಿಂಬಾಳ್ಕರ್‌

ಎಂ.ಬಿ.ಬಿ.ಎಸ್,

ಎಂ.ಎಸ್ (ಸ್ತ್ರೀ ರೋಗ ಮತ್ತು ಕೃತಕ ಗರ್ಭಧಾರಣಾ ತಜ್ಞರು)

ಎಂ.ಬಿ.ಬಿ.ಎಸ್, 
ಎಂ.ಎಸ್
(ಸ್ತ್ರೀ ರೋಗ ಮತ್ತು ಕೃತಕ ಗರ್ಭಧಾರಣಾ ತಜ್ಞರು)

ಉತ್ತರ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ

ಖಾನಾಪುರ ಮಾಜಿ ಶಾಸಕರು 

ಆತ್ಮೀಯ ಮತಭಾಂದವರೆ,

 

ಇಷ್ಟು ದಿನಗಳ ಕಾಲ ಖಾನಾಪುರದ ಜನರ ಆಶಿರ್ವಾದದಿಂದ ಅಲ್ಲಿನ ಶಾಸಕಿಯಾಗಿ ಅವರ ಸೇವೆ ಮಾಡುವ ಭಾಗ್ಯ ನನ್ನದಾಗಿತ್ತು. ಶಾಸಕಿಯಾಗಿ ನನ್ನ ಕೆಲಸಗಳನ್ನು ಅತಿ ನಿಷ್ಟೆಯಿಂದ ಪೂರೈಸಿರುವುದು ನನಗೆ ಆತ್ಮತೃಪ್ತಿ ತಂದಿದೆ. ಕಾಂಗ್ರೆಸ್‌ ಪಕ್ಷದ ವರಿಷ್ಠರ ನಿರ್ದೇಶನದಂತೆ ಈಗ ಉತ್ತರ ಕನ್ನಡದ ಜನತೆಯ ಸೇವೆ ಮಾಡುವ ಅವಕಾಶ ಸಕ್ಕಿದೆ. ಇದಕ್ಕಾಗಿ ನಾನು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಪಕ್ಷದ ವರಿಷ್ಠರಿಗೆ ಆಭಾರಿ.  

‌ಉತ್ತರ ಕನ್ನಡ ಜಿಲ್ಲೆಯು ಕರಾವಳಿ, ಮಲೆನಾಡು ಮತ್ತು ಬಯಲು ಸೀಮೆಯನ್ನು ಒಳಗೊಂಡ ಒಂದು ವಿಭಿನ್ನ ಮತ್ತು ವಿಶೇಷ ಜಿಲ್ಲೆ. ಕರಾವಳಿಯ ಸಮುದ್ರ, ಮಲೆನಾಡಿನ ವೈಭವ, ಪ್ರಕೃತಿಯ ಸೌಂದರ್ಯ, ರಮಣೀಯ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳು, ಸುಂದರ ನದಿಗಳು ಮತ್ತು ವಿಶಿಷ್ಟ ಸಂಸ್ಕೃತಿಗಳಿಂದ ಕೂಡಿದ ಒಂದು ಅಪರೂಪದ ಜಿಲ್ಲೆ. ಇಂತಹ ಜಿಲ್ಲೆಯಲ್ಲಿ ನಾನು ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದು ನಿಜಕ್ಕೂ ಹೆಮ್ಮೆ ತಂದಿದೆ.

ಅಭಿವೃದ್ಧಿ ಕಾರ್ಯಗಳಲ್ಲಿ ಇಂದಿಗೂ ಉತ್ತರ ಕನ್ನಡ ಜಿಲ್ಲೆ ಹಿಂದುಳಿದಿರುವುದು ನಿಜಕ್ಕೂ ಬೇಸರದ ಸಂಗತಿ. ನಿಮ್ಮಿಂದಲೇ 6 ಬಾರಿ ಆಯ್ಕೆಗೊಂಡ ಇಲ್ಲಿನ ಸಚಿವರು ಎಚ್ಚರವಾಗೋದು 5 ವರ್ಷಗಳಿಗೊಮ್ಮೆ, ಅದೂ ಚುನಾವಣಾ ಸಂದರ್ಭದಲ್ಲಿ ಮಾತ್ರ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಿಲ್ಲ. ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಪಡೆಯಲು ಜನರು ಪಕ್ಕದ ಜಿಲ್ಲೆಗಳಿಗೆ ಪ್ರಯಾಣಿಸಬೇಕು. ಭವಿಷ್ಯದ ಭರವಸೆಯಾಗಿರುವ ಯುವಜನತೆಯ ಮನಸ್ಸಿನಲ್ಲಿ ದ್ವೇಷದ ರಾಜಕಾರಣ, ಧರ್ಮದ ಹೆಸರಿನಲ್ಲಿ ಅಧರ್ಮದ ಬೀಜ ಬಿತ್ತಲಾಗುತ್ತಿದೆಯೇ ಹೊರತು, ಅವರಿಗೆ ಉತ್ತಮ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಈವರೆಗೂ ಒದಗಿಸಿಲ್ಲ. ಕೆಲಸಕ್ಕಾಗಿ ಉತ್ತರ ಕನ್ನಡದ ಯುವಜನತೆ ದೂರದ ಮುಂಬೈ, ಗೋವಾ ಮತ್ತು ಕೇರಳಕ್ಕೆ ವಲಸೆ ಹೋಗುತ್ತಿದ್ದಾರೆ. ಇನ್ನು ಉನ್ನತ ಶಿಕ್ಷಣದ ಕನಸು ಹೊತ್ತಿರುವ ವಿದ್ಯಾರ್ಥಿಗಳು ಕೂಡ ಪರವೂರಿಗೆ ತೆರಳುತ್ತಿದ್ದಾರೆ.

ಕನಿಷ್ಟ ಬೆಂಬಲ ಬೆಲೆ ಸಿಗದ ರೈತರು ಮತ್ತು ಮೂಲಭೂತ ಸೌಲಭ್ಯವಿಲ್ಲದ ಮೀನುಗಾರರ ಸ್ಥಿತಿಯಂತೂ ಚಿಂತಾಜನಕ. ಇನ್ನು ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಪ್ರವಾಸಿ ತಾಣಗಳ, ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳು ನನಸಾಗಲಾರದ ಕನಸಾಗಿದೆ.

ಇದೆಲ್ಲದಕ್ಕೂ ನಾಂದಿ ಹಾಡಲು ನಾನು ನಿಮ್ಮ ಮುಂದೆ ನಿಂತಿದ್ದೇನೆ. ಅಭಿವೃದ್ಧಿ ಒಂದೇ ನನ್ನ ಮೂಲಮಂತ್ರ. ಇಲ್ಲಿನ ನೆಲ, ಜಲ ಮತ್ತು ಸಂಸ್ಕೃತಿ ಯನ್ನು ಕಾಪಾಡಲು ನಾನು ಬದ್ಧಳಾಗಿದ್ದೇನೆ. ಉತ್ತರ ಕನ್ನಡದ ಜೀವನದಿಯಾದ ಕಾಳಿ ನದಿಯ ಯೋಜನೆಯನ್ನು ಯಶಸ್ವಿಗೊಳಿಸುತ್ತೇನೆ. ಯುವಕರಿಗೆ ಉದ್ಯೋಗ ಅವಕಾಶ, ಗುಣಮಟ್ಟದ ವೈದ್ಯಕೀಯ ಸೌಲಭ್ಯ, ಕುಮಟಾ ತಾಲೂಕಿನಲ್ಲಿ ಸೂಪರ್‌ ಸ್ವೆಷಾಲಿಟಿ ಆಸ್ಪತ್ರೆ ಮತ್ತು ಉತ್ತಮ ಶಿಕ್ಷಣದ ವ್ಯವಸ್ಥೆ ಕಲ್ಪಿಸುತ್ತೇನೆ. ಇನ್ನು ಇಲ್ಲಿನ ಪ್ರವಾಸಿ ತಾಣಗಳು, ದ್ವೀಪ, ಧಾರ್ಮಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಆರ್ಥಿಕವಾಗಿ ಬಲಿಷ್ಠ ಜಿಲ್ಲೆಯನ್ನಾಗಿ ಪರಿವರ್ತಿಸುವ ಸಂಪೂರ್ಣ ಪ್ರಯತ್ನ ಮಾಡುತ್ತೇನೆ.

“ಸರ್ವರಿಗೂ ಸಮಪಾಲು - ಸರ್ವರಿಗೂ ಸಮಬಾಳು” ಎಂಬ ಆದರ್ಶವನ್ನು ನಂಬಿರುವ ನಮ್ಮ ಕಾಂಗ್ರೆಸ್‌ ಸರ್ಕಾರವು ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಯಶಸ್ಚಿಯಾಗಿ ಈಡೇರಿಸಿದೆ. ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಮತ್ತು ಶಕ್ತಿ ಗ್ಯಾರಂಟಿಗಳು ರಾಜ್ಯದ ಅದೆಷ್ಟೋ ಬಡ ಹಾಗೂ ಮಧ್ಯಮ ವರ್ಗದ ಜನರ ಮನ-ಮನೆಗಳನ್ನು ಬೆಳಗಿದೆ ಮತ್ತು ಬಡವರ ಹಸಿವನ್ನು ನೀಗಿಸಿದೆ. ಯುವಜನತೆಯ ಉದ್ಯೋಗದ ಕನಸನ್ನು ನನಸಾಗಿದೆ. ಮಹಿಳೆಯರ ಸ್ವಾವಲಂಬನಾ ಬದುಕಿನ ಕನಸುಗಳಿಗೆ ರೆಕ್ಕೆ ನೀಡಿದೆ. ಯುವ ಸಬಲೀಕರಣ, ಮಹಿಳಾ ಸಬಲೀಕರಣ, ಬಡವರ ಕಲ್ಯಾಣಕ್ಕೆ ನಮ್ಮ ಕಾಂಗ್ರೆಸ್‌ ಸರ್ಕಾರ ಬದ್ಧವಾಗಿದೆ.

ಇದರ ಮುಂದಿನ ಹಂತವಾಗಿ ಯುವ ಸಬಲೀಕರಣಕ್ಕಾಗಿ ಯುವ ನ್ಯಾಯ ಗ್ಯಾರಂಟಿ, ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ನ್ಯಾಯ ಗ್ಯಾರಂಟಿ, ರೈತರ ಬದುಕು ಹಸನಾಗಿಸಲು ರೈತ ನ್ಯಾಯ ಗ್ಯಾರಂಟಿ, ಶ್ರಮಿಕ ವರ್ಗಕ್ಕೆ ಸಾಮಾಜಿಕ ಭದ್ರತೆ ಒದಗಿಸಲು ಶ್ರಮಿಕ ನ್ಯಾಯ ಗ್ಯಾರಂಟಿ ಹಾಗೂ ಹಿಂದುಳಿದ ವರ್ಗಕ್ಕೆ ನ್ಯಾಯ ಒದಗಿಸಲು ಪಾಲುದಾರಿಕೆ ನ್ಯಾಯ ಗ್ಯಾರಂಟಿ ಜಾರಿಗೊಳಿಸಲಿದೆ.

ಬದಲಾವಣೆ ತರುವುದು ನಿಮ್ಮ ಕೈಯ್ಯಲ್ಲಿದೆ. ಅಭಿವೃದ್ಧಿಯ ಭರವಸೆಯನ್ನು ನಿಮ್ಮ ಮುಂದೆ ಇಟ್ಟು, ಅದನ್ನು ಸಾಕಾರಗೊಳಿಸಲು ಒಂದು ಅವಕಾಶ ಕೇಳುತ್ತಿದ್ದೇನೆ. ನಿಮ್ಮ ಅಮೂಲ್ಯ ಮತವನ್ನು ನನಗೆ ನೀಡುವ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ದ್ವೇಷದ ರಾಜಕಾರಣಕ್ಕೆ ಪೂರ್ಣ ವಿರಾಮವಿಡಿ. ಭಾಷಣಕ್ಕೆ ಸೀಮಿತವಾಗಿದ್ದ ಅಭಿವೃದ್ಧಿ ಕಾರ್ಯಗಳನ್ನು ನಾನು ಜಾರಿಗೊಳಿಸುತ್ತೇನೆ. ಜನಸೇವೆ ಮಾಡುವ ನನ್ನ ಕೈಗಳಿಗೆ ನಿಮ್ಮ ಮತ ನೀಡುವ ಮೂಲಕ ಬಲತುಂಬಿ. ನಿಮ್ಮ ಮನೆ ಮಗಳಾಗಿ, ನಿಮ್ಮ ಕಷ್ಟಗಳಿಗೆ ಹೆಗಲಾಗಿ ಸೇವೆ ಮಾಡುವ ಒಂದು ಅವಕಾಶ ನೀಡಿ.

ನಮ್ಮ ನೆಲ, ನಮ್ಮ ಜಲ, ನಮ್ಮ ಸಂಸ್ಕೃತಿ 

ನೊಂದಣಿಗಾಗಿ ಇಲ್ಲಿ ಭರ್ತಿ ಮಾಡಿ.

bottom of page